ಅಮರಕಂಟಕ
	ಮಧ್ಯಪ್ರದೇಶದ ವಿಲಾಸಪುರ ಜಿಲ್ಲೆಯಲ್ಲಿನ ಒಂದು ಪರ್ವತ. ಮೇಕಲಾ ಎಂಬ ಹೆಸರೂ ಇರುವುದರಿಂದ ಇಲ್ಲಿ ಹುಟ್ಟುವ ನರ್ಮದಾ ನದಿಯನ್ನು ಮೇಕಲಕನ್ಯೆಯೆಂದು ಕರೆಯುವರು. ಕಾಳಿದಾಸ ಈ ಪರ್ವತವನ್ನು ಅಮರಕೂಟವೆಂದು ಕರೆದಿದ್ದಾನೆ (ಮೇಘದೂತ). ಇಲ್ಲಿ ಅಮರನಾಥ, ನರ್ಮದಾ ಮುಂತಾದ ಮಂದಿರಗಳಿವೆ. ಶಿವ ಸುಟ್ಟಂಥ ತ್ರಿಪುರಗಳಲ್ಲಿ ಒಂದು ಅಮರಕೂಟದಲ್ಲಿ ಇದ್ದಿತೆಂದು ಮತ್ಸ್ಯಪುರಾಣದಲ್ಲಿ ಹೇಳಿದೆ. ಗ್ರಹಣಕಾಲದಲ್ಲಿ ಈ ಪರ್ವತಯಾತ್ರೆ ಮಾಡಿದರೆ ಹತ್ತು ಅಶ್ವಮೇಧಯಾಗ ಮಾಡಿದ ಪುಣ್ಯ ಬರುವುದೆಂದು ಪದ್ಮ ಪುರಾಣದಲ್ಲಿ ಹೇಳಿದೆ. ಇಲ್ಲಿರುವ ಭಗ್ನವಾದ ಕರ್ಣಮಂದಿರ ವಾಸ್ತುಶಿಲ್ಪದ ದೃಷ್ಟಿಯಿಂದ ಪರಿಶೀಲನಾರ್ಹವಾಗಿದೆ.									      
(ಬಿ.ಜಿ.)

	ಸು.11ನೆಯ ಶತಮಾನದಲ್ಲಿ ಕಟ್ಟಿದ ಹಲವು ದೇವಾಲಯಗಳಲ್ಲಿ ಕೇಶವ ನಾರಾಯಣ ಮತ್ತು ಮಚ್ಚೇಂದ್ರನಾಥ ದೇವಾಲಯಗಳು ಮಧ್ಯಭಾರತದ ನಾಗರಶೈಲಿಯ ವಾಸ್ತುಕಲೆಗೆ ಉತ್ತಮ ಉದಾಹರಣೆಗಳು. ಇವುಗಳಲ್ಲಿ ಒಂದು ಗರ್ಭಗೃಹವೂ ಮುಂದೆ ಅಂತರಾಳವೂ ಅದರ ಮುಂದೆ ಮಂಟಪವೂ ಇವೆ. ಮಂಟಪಗಳು ಅರ್ಧಮಟ್ಟಿಗೆ ಮಾತ್ರ ತೆರೆದಿದ್ದು, ಒಳಗೆ ಕುಳಿತುಕೊಳ್ಳಲು ಕಲ್ಲಿನಿಂದ ಮಾಡಿದ ಒರಗುಜಗಲಿಗಳಿವೆ. ಮೇಲಿನ ಛಾವಣಿ ಮಟ್ಟಪಟ್ಟಿಕೆಗಳಿಂದ ರಚನೆಗೊಂಡು ಪಿರಮಿಡ್ಡಿನ ಆಕೃತಿಯಲ್ಲಿದ್ದು ಕಂಬಗಳ ಮೇಲೆ ಎತ್ತಲ್ಪಟ್ಟಿದೆ. ಗರ್ಭಗೃಹಗಳ ಮೇಲೆ ಚೈತ್ಯಕವಾಟಾಕೃತಿಯ ಗೂಡುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟು, ಎತ್ತರವಾದ ಒಳಬಾಗುಳ್ಳ ನಾಗರಸಂಪ್ರದಾಯದ ಶಿಖರಗಳಿವೆ. ಡಾಹಲದ ರಾಜಾಕರ್ಣನಿಂದ (1040-1070) ಕಟ್ಟಲಾದುದೆಂದು ಹೇಳಲಾಗುವ ದೇವಾಲಯ ಒಂದು ತ್ರಿಕೂಟಾಚಲ. ಇದರಲ್ಲಿ ಮಧ್ಯಭಾರತ ನಾಗರಶೈಲಿಗೆ ಹೊಸದಾದ ಕೆಲವು ನಮೂನೆಗಳನ್ನು ಅಳವಡಿಸಿರುವುದು ಕಾಣಬರುತ್ತದೆ. 											
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ